ನಾಗದಾಳಿ  -
ರೂಟೇಸೀ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಮೂಲಿಕೆ. ವೈಜ್ಞಾನಿಕ ಹೆಸರು ರೂಟಾ ಗ್ರಾವಿಯೊಲೆನ್ಸ್. ಇದರ ಎತ್ತರ 30-90 ಸೆಂಮೀ. ಇದು ಮೂಲತಃ ಮೆಡಿಟರೇನಿಯನ್ ಪ್ರದೇಶದ್ದು. ಔಷಧಿ ಪ್ರಾಮುಖ್ಯವಿರುವುದರಿಂದ ಇದನ್ನು ಭಾರತದ ಎಲ್ಲಾ ಕೈತೋಟಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಎಲೆಗಳು ಗರಿರೂಪದವು. ಇವುಗಳ ಬಣ್ಣ ನೀಲಿಮಿಶ್ರಿತ ಹಸಿರು. ಹೂಗಳು ಹಳದಿ ಬಣ್ಣದವು; ಕಾರಿಂಬ್ ಮಾದರಿಯ ಪುಷ್ಪಮಂಜರಿಯಲ್ಲಿ ಸಮಾವೇಶಗೊಂಡಿವೆ. ಫಲಗಳು ಸಂಪುಟ (ಕ್ಯಾಪ್ಸೂಲ್ಸ್) ಮಾದರಿಯವು.

    ಆಯುರ್ವೇದದಲ್ಲಿ ನಾಗದಾಳಿಗೆ ಪ್ರಮುಖ ಸ್ಥಾನವುಂಟು. ಈ ಸಸ್ಯದಿಂದ ಬಟ್ಟಿ ಇಳಿಸಿ ಪಡೆಯಲಾಗುವ ಎಣ್ಣೆ ಬಲು ಪ್ರಯೋಜನಕಾರಿ. ಎಣ್ಣೆಯ ಅಂಶ ಬೇರುಗಳಿಗಿಂತ ಕಾಂಡ ಹಾಗೂ ಎಲೆಗಳಲ್ಲಿ ಅಧಿಕವಾಗಿವೆ. ಇದಕ್ಕೆ ಘಾಟು ವಾಸನೆ ಮತ್ತು ಖಾರ ಹಾಗೂ ಕಹಿಮಿಶ್ರಿತ ರುಚಿ ಉಂಟು. ಮಂದ ದ್ರವದಂತಿರುವ ಈ ಎಣ್ಣೆಯಲ್ಲಿ ಕಿಟೊನಿಕ್ ಗುಂಪುಗಳಿವೆ. ಇದನ್ನು ಜಂತುನಾಶಕವಾಗಿ, ಶ್ಲೇಷ್ಮನಿವಾರಿಯಾಗಿ ಹಾಗೂ ವಾಕರಿಕೆಯನ್ನು ನಿಲ್ಲಿಸುವ ಮದ್ದಾಗಿ ಬಳಸಲಾಗುತ್ತಿದೆ. ಅತಿ ಹೆಚ್ಚಿನ ಶೀತ, ನಾಲಗೆ ದಪ್ಪವಾಗುವಿಕೆ ಹಾಗೂ ಕ್ಷೀಣಗೊಂಡ ನಾಡಿಮಿಡಿತ ಮುಂತಾದ ಪರಿಸ್ಥಿತಿಗಳಲ್ಲಿ ಈ ಎಣ್ಣೆಯಿಂದ ತಯಾರಿಸಿದ ಔಷಧವನ್ನು ಉಪಯೋಗಿಸುವುದುಂಟು. ಪಶುವೈದ್ಯದಲ್ಲೂ ಈ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸುಗಂಧ ದ್ರವ್ಯ ಮತ್ತು ಸಾಬೂನಿಗೆ ಹಾಕುವ ಪರಿಮಳಗಳಿಗೆ ವಿಶೇಷ ವಾಸನೆ ಕೊಡಲು ಸಹ ಇದನ್ನು ಉಪಯೋಗಿಸುವರು.

    ಹಿಸ್ಟೀರಿಯ ಹಾಗೂ ಅತಿಸಾರಗಳಲ್ಲಿ ನಾಗದಾಳಿಯ ಕಷಾಯ ಪ್ರಯೋಜನಕಾರಿ. ಸಂಧಿವಾತ ರೋಗದಲ್ಲಿ ಕೀಲುಗಳ ಮೇಲೆ ಈ ಕಷಾಯವನ್ನು ಉಜ್ಜುವುದುಂಟು. ಆದರೆ ಇದು ದೇಹದೊಳಗೆ ಹೆಚ್ಚಿನ ಗಾತ್ರದಲ್ಲಿ ಸೇರಿದಾಗ ಅಮಲು ತರಿಸುತ್ತದೆ. ಇತ್ತೀಚಿನ ರಾಸಾಯನಿಕ ವಿಶ್ಲೇಷಣೆಯಿಂದ ಈ ಮೂಲಿಕೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೌಮರಿನ್‍ಗಳಿವೆಯೆಂದು ಗೊತ್ತಾಗಿದೆ. ನಾಗದಾಳಿಯ ಎಲೆಗಳನ್ನು ಹುರಿದಿಟ್ಟುಕೊಂಡು ಆಗಾಗ್ಗೆ ಕೆಲವು ಆಹಾರ ಪದಾರ್ಥಗಳಿಗೆ ಮತ್ತು ಪಾನೀಯಗಳಿಗೆ ಪರಿಮಳ ಕೊಡಲು ಉಪಯೋಗಿಸುವುದುಂಟು. ಭಾರತ ಮತ್ತು ದಕ್ಷಿಣ ಆಫ್ರಿಕಗಳಲ್ಲಿ ಎಲೆಗಳ ಕಷಾಯವನ್ನು ಜ್ವರನಿವಾರಕವನ್ನಾಗಿ ಉಪಯೋಗಿಸುವುದಿದೆ. ಈ ಸಸ್ಯದ ಎಲೆ ಹಾಗೂ ಪರಾಗರೇಣುಗಳಿಂದ ಚರ್ಮದ ಉರಿತ ಉಂಟಾಗುವುದೆಂದು ವರದಿಯಾಗಿದೆ.

    ನಾಗದಾಳಿಯನ್ನು ಕೈತೋಟದಲ್ಲಿ ಬೆಳೆಸಿದರೆ ನಾಗರ ಹಾವುಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಈ ಅಂಶಕ್ಕೆ ವೈಜ್ಞಾನಿಕ ಆಧಾರ ಇಲ್ಲ.								
			(ಸಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ